ಫ್ರಾಂಕ್ ಫಟ್೯ ಪುರಾಣ: ನಾಂದಿ

Posted: ಆಗಷ್ಟ್ 29, 2014 in ಅವಿಭಾಗೀಕೃತ

ನಾಂದಿ

“He who listens hard doesnot see” – Franz Kafka
“ಕೇಳು ಜನಮೇಜಯ…”ವೆಂದು
ಫ್ರಾಂಕ್ ಫಟ್೯ ಪುರಾಣ ಕಥಿಸುವ ವೇಳೆಗೆ
ಪುರಾಣಿಕರು ಎದ್ದು ನಡೆದಿದ್ದಾರೆ
ಜೋತಮ್ಮ ಕಳೆದುಹೋಗಿದ್ದಾಳೆ
ನಡುಮನೆಯ ದೀಪ ಅಲ್ಲಾಡುತ್ತಿದೆ

ಅದೇ ಫ್ರಾಂಕ್ ಫಟ್೯ : ಪುಸ್ತಕ ಪ್ರದರ್ಶನದ ನೆವದಲ್ಲಿ
ಅಟ್ಟದ ಮೂಲೆಯಲ್ಲಿ ಇಂಚಿಂಚಾಗಿ ಯುರೋಪನ್ನ
ತೆರೆದುಬಿಡುತ್ತಿದ್ದ
ಅಕ್ಷರಗನ್ನಡಿಯೊಳಗಿನ ಫ್ರಾಂಕ್ ಫಟ್೯
ಕಾಲಡಿಯ ಮಣ್ಣಾಗಿದ್ದು ಇದು ಮೂರನೇ ಬಾರಿ.

ಫ್ರಾಂಕ್ ಫಟ್೯ ವಿಮಾನ ನಿಲ್ದಾಣ-1
ಏರ್ ಟೆಲ್ ಸಿಮ್ ಕೆಲಸಮಾಡುತ್ತಿದೆಯಾ ದೂರದ
ಜರ್ಮನಿಯೊಳಗೆ ಎಂದು ನೋಡುತ್ತಿದ್ದಾನೆ ಹುಡುಗ
ಡೊಮೆಸ್ಟಿಕ್ ಏರಿಯಾದಲ್ಲಿ ವೈಫೈ ಸಿಕ್ಕಿಬಿಟ್ಟಿದೆ:
ಬೆಂಗಳೂರಿಂದ ಹೊರಟ ರಾತ್ರಿ ಮುಳುಗಿಸಿದ್ದ ಮಾತುಗಳಿಂದ
ತೇಲಾಡುತ್ತಾ ಮೇಲೆದ್ದು ತನ್ನ ಮುಂದಿನ
ತಾಣಕ್ಕೆ ನಡೆಯಲನುವಾಗಿದ್ದಾನೆ-
ಬೆಳಗಿನಿಂದ ಸಂಜೆ ನಿಲ್ದಾಣದೊಳಗೆ ಏನೇನೋ
ಕನಸುಗಳು-
ಕಂಬಳಿಹುಳ ರೋಮ ಕಳಚಿ ರೆಕ್ಕೆ ಮೂಡಿಸಿಕೊಂಡಂತೆ
ಹೊಸಗಾಳಿಯಿಂದ ಎದೆ ತುಂಬಿಕೊಳ್ಳುವ ಧಾವಂತ
ತಾನೊಬ್ಬನೇ ಅಲ್ಲ ಈ ಜಗದೊಳಗೆ- ಇನ್ನೊಂದು
ಜೀವವಿದೆ ಮಿಡಿಯುತ್ತಾ, ಎಂದು ಮನದೊಳಗೆ.

ಭರವಸೆ ವಚು೯ವಲ್ ವಾಸ್ತವದೊಳಗೆ ಸಾಗಿ
ಗಾಢ ಭಾವ
ಹೊಸತೊಂದು ವಾಸ್ತವವ ತೆರೆದಿಟ್ಟಿತ್ತು
ಈ ಇಲ್ಲಿ ಕಳೆದುಹೋಗಿದ್ದ ಹುಡುಗ
ಯುರೋಪೂ ಅಲ್ಲದೆ ಭಾರತವೂ ಅಲ್ಲದೆ ತ್ರಿಶಂಕು ಸ್ವರ್ಗದಲ್ಲಿದ್ದ: ಎಲ್ಲ ಸರಿಯಾಗಿತ್ತು
ತ್ರಿಶಂಕು ಸ್ಥಿತಿಯನ್ನರಿಯದೇ ಸ್ವರ್ಗವ
ವಿಸ್ತರಿಸಲು, ವಿಪರೀತ ವಾಸ್ತವವ ದೈನಿಕದೊಳಗೆ
ಬೆಸೆಯಲು ತೊಡಗುವ ತನಕ.

ಫ್ರಾಂಕ್ ಫಟ್೯ ರೈಲು ನಿಲ್ದಾಣ:
ಆ ಹೊತ್ತಿಗೆ ಆತ ಫ್ರಾಂಕ್ ಫಟ್೯ ಗೆ ಬಂದಿದ್ದು
ಎರಡನೇ ಬಾರಿ:
ರೈಲ್ವೇ ನಿಲ್ದಾಣಕ್ಕೆ, ವಿಮಾನದ್ದಲ್ಲ; ರಾತ್ರಿ ಕಳೆಯಲು, ಹಗಲನ್ನಲ್ಲ;
ವೆನಿಸಿನ ವರ್ತಕನಿಂದ ಭಾವವ್ಯಾಪಾರದ ಕಸುಬುಗಾರಿಕೆಯನ್ನರಿಯುತ್ತಾ
ವೆನಿಸಿನಲ್ಲಿ ಸಾವ ಕಂಡರಿಯುತ್ತಾ, ವಾದ್ಯವನರಿಯದೆ ರುದ್ರವೀಣೆಯ ನಾದಗಳ ಕೇಳುತ್ತ
ಕಲೋಸಿಯಂ ನಲ್ಲಿ ಕೇಳಿಸಿದ ಚರಿತ್ರೆಯ ಬಿಕ್ಕಳಿಕೆಯ ನೆನೆಯುತ್ತಾ
ಫ್ಲಾರೆನ್ಸಿನ ಮೋಡಿಗಾತಿಯ ಹೆಜ್ಜೆಜಾಡ ನೋಡುತ್ತಾ

ಹುಡುಗನಿರಬೇಕಾದರೆ
ಅಂಥದೇ ಹೆಜ್ಜೆಜಾಡನ್ನ ತಾನೂ ಅನುಸರಿಸುತ್ತಿದ್ದೇನೆ
ಎಂದರಿವಾಗಲಿಲ್ಲ ಆಗ
ಫ್ರಾಂಕ್ ಫಟ್೯ ನ ರೈಲು ನಿಲ್ದಾಣದ ರಾತ್ರಿಯಲ್ಲಿ
ಲಂಡನ್ನಿಗೆ ಏಣಿಕಟ್ಟುತ್ತಿದ್ದ
ಮುಗ್ಧವಾಗಿ
ಹತ್ತಿಹೋದವರಿಗೆ ಏಣಿಯ ಹಂಗಿರದೆಂದು ತಿಳಿದೂ ತಿಳಿಯದೇ.

ಫ್ರಾಂಕ್ ಫಟ್೯ ವಿಮಾನ ನಿಲ್ದಾಣ-2
ಹಂಗು ತೊರೆದಿತ್ತಾಗ
ಬೆಂಗಳೂರಿಗೆ ಹೊರಟುನಿಂತಾಗ
ಅದೇ ಹಗಲಿನ ಅದೇ ವಿಮಾನ ನಿಲ್ದಾಣ-
ಕರಾಳ ಎಪ್ರಿಲಿನ ಬದಲು ಗ್ರೀಷ್ಮವೀಗ: ಕರಾಳತೆಗೆನೂ ಕಮ್ಮಿಯಿಲ್ಲ:
ಮೂಡಿದ್ದ ರೆಕ್ಕೆಗಳ ಬಣ್ಣಗಳುದುರಿವೆ-
ಮಿಡಿವೆದೆ ಬೆಲ್ ಫಾಸ್ಟ್ ನ ಮಂಜಲ್ಲಿ
ಕಳೆದುಹೋಗಿದೆ
ವಿಕ್ಟೋರಿಯಾ ಸ್ಟೇಷನ್ನಿನಲ್ಲಿ ಜಗ ಕಳಚಿ ಬಿದ್ದಂತಾಗಿ
ಬೆಪ್ಪಾಗಿದ್ದಾನೆ ಹುಡುಗ
ಹಂಗಿನ ಪ್ರಶ್ನೆ ಬಲಿಪಡೆದುಕೊಂಡಿದೆ
ಬದುಕ
ಎಂದು ನಾಡಿ ಹಿಡಿದಿದ್ದಾನೆ
ಫ್ರಾಂಕ್ ಫಟ್೯ ನಲ್ಲಿ
ಪರದೇಸಿಯಾಗಿ

ಪುರಾಣದ ಬಾಲ ಮೀರಿ ಬೆಳೆದಿದೆ
ಹದ್ದ
ಜೋತಮ್ಮ ಕಳೆದು ಹೋಗಿರುವುದು
ಮತ್ತೆ ಸಿಗಲಿಕ್ಕಲ್ಲ ಈ ಬಾರಿ
ಪುರಾಣಿಕರು ಎದ್ದು ನಡೆದಿರುವುದು
ಮತ್ತೆ ಮರಳಲಿಕ್ಕಲ್ಲ
ಅಲ್ಲಾಡಿದ್ದು ದೀಪವಲ್ಲ, ಅದನಿಟ್ಟ ನೆಲ
ಪುರಾಣಕ್ಕೆ ಒಳಗಿಲ್ಲ, ಹೊರಗೆಂಬುದೂ ಇಲ್ಲ
ನಿಂತಲ್ಲೆ ಸಂಭವಿಸುವುದದು: ಸಂಭವಿಸಿದ ಕ್ಷಣದ ಸತ್ಯ
ಸಂಭವಗಳ ಸರಪಣಿಗೆ ಸಿಲುಕಿ
ಉಳಿದುಬಿಡಬಹುದು ದೃಢವೆಂಬಂತೆ:
ಸರಪಣಿ ಕಳಚುವ ವರೆಗೆ
ಬೆಲ್ ಫಾಸ್ಟ್ ನಿಂದ ಸೋಫಿಯಾದುದ್ದ ಸರಪಣಿ ಕಳಚಿದ್ದನ್ನ
ಫ್ರಾಂಕ್ ಫಟ್೯ ಪುರಾಣ ಕಥಿಸತೊಡಗಿದೆ
‘ಕೇಳು ಜನಮೇಜಯ…’ ಎನ್ನುತ್ತಾ
ಏಕಾಗ್ರವಾಗಿ ಕೇಳುವಾತ ಕಾಣುವುದಿಲ್ಲ ಏನನ್ನೂ ಎನ್ನುತ್ತಾ
ಕಿಸಿದಿದ್ದಾನೆ ಕಾಫ್ಕ;
ಕೇಳಿದ್ದ ಜನಮೇಜಯ ಕಂಡಿದ್ದಾದರೂ ಏನು?

Frankfurt am Main

ಕ್ಷಮೆಯಿಲ್ಲ!

Posted: ಆಗಷ್ಟ್ 26, 2014 in ಅವಿಭಾಗೀಕೃತ

ಕಡೆಗೂ ಕೊನೆಮುಟ್ಟಿತ್ತು
ಬುಖಾರೆಸ್ಟ್ ನ ಮುಂಜಾವಿನಲ್ಲಿ
ಜಾವದ ಬೀಸಿಗೆ ಮನದ ಗುಳ್ಳೆ ಒಡೆದಿತ್ತು
ಪಳಕ್ಕನೆ
ತೆರೆಮೇಲೆ ಬಿದ್ದ ಆಲಿಕಲ್ಲು ಮೀನಿನ ಕಣ್ಣ ಕುಯ್ದಂತೆ
ನೆತ್ತರಿಲ್ಲ, ಬರಿ ಗಾಯವಷ್ಟೇ
ಸಭ್ಯ ಐಲಿನ ಮಾಟವಾಗಿ ಕಾಡಿದ
ಗರಗಸದ ಗಾಯ

ಗುಳ್ಳೆಯೊಳಗೆ ನೂರು ಹುಣ್ಣುಗಳು
ಚೆಲ್ಲುವ ಜೀವನೋತ್ಸಾಹದ ಕೀವು
ಗುಳ್ಳೆ ಪ್ರಖರವಾದಂತೆ ತೆಳುವಾಗುತ್ತಿತ್ತು ಚರ್ಮ-
ಹೊಳಪು ಸೂಸುತ್ತಿದ್ದ ಈ ತೆಳು ತೊಗಲು
ಪ್ರತಿನಿಮಿಷದ ಮೌನದಂತ್ಯಕ್ಕೆ ಒಡೆಯಲೇ ಬೇಕಿತ್ತು ಒಂದೊಮ್ಮೆ;
ಹುಣ್ಣು ಮೂಡಿಸಿದ ಬರೆ
ಅದೆಷ್ಟು ಹಳತಾಗಿತ್ತು? ಆದರೂ ಈಗಿನಷ್ಟೇ ಹೊಸತು.

ಒಳಗಡೆ ತುಮುಲಾಟ: ಆಟ ಮುಗಿದಿದೆ; ಎದ್ದು ನಡೆ ಎಂದೊಮ್ಮೆ,
ಬಿದ್ದ ತೆರೆ ಮತ್ತೆ ಮೇಲೆದ್ದು ಹೊಸ ಅಂಕ
ಶುರುವಾದೀತೆಂಬ ಭಾವವಿನ್ನೊಮ್ಮೆ
ಅದೇ ಹಳೆ ಚಡಪಾಟ- ಹಿಮಾಲಯದಷ್ಟು ಹಳತು, ಆದರೂ
ಈಗ ಬಿಟ್ಟ ಉಸಿರಂತೆ ಪ್ರತಿ ಇಂಚಲ್ಲೂ ಭಿನ್ನ;
ಕೊಡುಕೊಳ್ಳುಗಳ ಕ್ಯಾಟಲಾಗು ತಯಾರಾಗುತ್ತಿದೆಯಂತೆ
‘ಒಪ್ಪಿಸಿಕೋ! ಇವೆಲ್ಲ ನನ್ನದಲ್ಲ’ ಎಂಬಂತೆ,
ಅಪ್ಪನ ತಿಥಿಯಂದು ಪಿಂಡವಿಟ್ಟು ಕರೆವಂತೆ;
ಬದಲಾಗಿರುವ ನಿನ್ನನ್ನ ‘ಬದಲಾಗಿದ್ದಿ’ ಎಂದದ್ದೇ ತಪ್ಪೇ?
ಅಥವಾ ಬದಲೆನಿಸಿದ್ದು ಭ್ರಮೆಯೇನು? ಅಥವಾ ಬದಲ ಬದಲಿನೊಳಗೆ ಪರ ಕರಗಿದ್ದು ತಿಳಿದಾಗಿತ್ತೇ? ಸ್ವ ದ ಹಮ್ಮಿನ ಕೂಸು?

ಬೊಗಸೆಯೊಡ್ಡಿದ್ದೆನಲ್ಲ ಅದೆಷ್ಟು ಬಾರಿ ಮಂಡಿಯೂರಿ,
ದ್ವೇಷಿಸಲಾಗದ ಪ್ರೀತಿಯೇ ದೈನ್ಯವಾಯಿತೇನು?
ಜಾತ್ರೆ ತಿರುಗಿ ಅಮಲೇರಿದಾಗ ದೈನ್ಯವಾಗಿ ಕಂಡಿದ್ದು ಹುಟ್ಟಿಸಿತ್ತು ಜಿಗುಪ್ಸೆ- ಸಹಜ ಬಿಡು-
ಬಣ್ಣದ ಗಿಲೀಟಿನಲ್ಲಿ ತೆರೆದೆದೆಯು ಮಂಕಾಗದೇನು?
ಬಣ್ಣದಂಗಡಿಗಳ ನೋಡಬೇಕಿತ್ತು ನೀನು ಹಗಲಲ್ಲಿ; ಕತ್ತಲಲ್ಲಷ್ಟೇ
ಬೆಳಕ ಮೈಮಾಟದ ಸೊಬಗು:
ನಾನು ಕತ್ತಲ ದ್ವೇಷಿ- ನೀ ಬಣ್ಣದ ಕೂಸು-
ಅಂದಾಗ ಇದು ಸಹಜ: ಯಾವತ್ತೋ ಸಿಗಬೇಕಿದ್ದು, ಆಗಾಗ
ಬಂದುಹೋಗಿದ್ದು ಹಾದಿತಿರುವಲ್ಲಿ ಮತ್ತೆ ಮುಖತೋರಿಸಿ
ಹೆಗಲೇರಿದೆ ಇಂದು- ಹೊತ್ತೊಯ್ಯಬೇಕು ನೆನಪ ಆಲ್ಬೆಟ್ರಾಸ್ ಅನ್ನು ಬದುಕಿನುದ್ದಕ್ಕೆ.

ಇಂದನ್ನೇ ಆಯ್ದುಕೊಂಡಿದ್ದೇಕೆ? ಪಾಪಿ ಪರದೇಸಿ ನಾಡಲ್ಲಿ ದರವೇಶಿಯಾದಾಗ?
ಗೆಳೆಯ ತಂದೆಯ ಸಾವಿನ ಸುದ್ದಿ ಹೊತ್ತು ತಂದ ಗಳಿಗೆಯನ್ನೇ
ನೀನೂ ಆಯ್ದುಕೊಂಡಿದ್ದೇಕೆ?
ಬಾಲ್ಕನ್ ದೇಶಗಳ ಬೀದಿಗಳಲ್ಲಿ ನಾಯಿಯಂತೆ
ಅಲೆಯುತ್ತಾ ಪ್ರಜ್ಞೆಯಂಚಲ್ಲಿ ಜಾರಿ ತಡಕಾಡುತ್ತಾ
ನಡೆಯುತ್ತಿದ್ದಾಗ;
ಎಲ್ಲ ಕ್ರೌರ್ಯಗಳೂ ನಿಶ್ಶಕ್ತ ಗಳಿಗೆಯಲ್ಲೇ
ಮುಗಿಬೀಳುವಿದೇಕೆ?
ಮುಗಿಬಿದ್ದು ಕಚಕಚನೆ ಕೊಚ್ಚುವವರ ದಂಡನ್ನ ನೀನೂ
ಸೇರಿಕೊಂಡಿದ್ದೇಕೆ?
ಅಥವಾ ಕೆಡುಕು ನನ್ನದೇ?
ಕನ್ನಡಿ ಬೇಕಿದೆ ನೋಡಿಕೊಳ್ಳಲು; ಚರ್ಮ ಸೀಳಿ ಸಾಗುವ ಎಕ್ಸ್-ರೇ
ಹೇಳಬೇಕಿದೆ: ನೀನಾಗಿದ್ದಿ ಅವೆರಡೂ, ಈಗ ನೀನು
ಹೇಳಿದ್ದೀಯೆಂದಮೇಲೆ ನಂಬಲೇ ಬೇಕು.

ಸೆಕೆಂಡಿನ ಮುಳ್ಳು ಸೀಳನ್ನಗಲಿಸುತ್ತಿದೆ:
ಆಸೆಯಿದೆ; ಭರವಸೆಯಿಲ್ಲ- ಪ್ರಪಾತದಂಚಲ್ಲಿ ಹಿಡಿದ ಒಣಹುಲ್ಲುಗರಿ ಮೂಡಿಸುವಂಥದದು
ಪಾಂಡೊರಾಳ ಪೆಟ್ಟಿಗೆ ಯುರೋಪಲ್ಲಿತ್ತೆಂಬುದು ಮರೆತುಹೋಗಿತ್ತು-
ಮುಚ್ಚಳವಗಲಿಸಿದ್ದೇನೆ ಈಗ:
ಕತರ್ೃವಿನ ಕಾರ್ಯಕ್ಕೆ ಕ್ಷಮೆಯಿಲ್ಲ

Bucharest